ಪ್ಲೂಮರ್, ವಿಲಿಯಮ್ ಚಾಲ್ರ್ಸ್ ಫ್ರಾಂಕ್ಲಿನ್
1903-. ದಕ್ಷಿಣ ಆಫ್ರಿಕದ ಕಾದಂಬರಿಕಾರ. ಹುಟ್ಟಿದ್ದು ಟ್ರಾನ್ಸ್‍ವಾಲಿನ ಪೀಟರ್ಸ್ ಬರ್ಗ್‍ನಲ್ಲಿ ಇಂಗ್ಲಿಷ್ ದಂಪತಿಗಳಿಗೆ ಮಗನಾಗಿ. ವಿದ್ಯಾಭ್ಯಾಸ ರಗ್ಬಿಯಲ್ಲಿ ನಡೆಯಿತು. ಅನಾರೋಗ್ಯ ನಿಮಿತ್ತ ಈತ ಕೆಲಕಾಲ ಸ್ಟಾರ್ಮಬರ್ಗ್ ಪರ್ವತ ಪ್ರದೇಶಗಳಲ್ಲಿದ್ದು ಕೊಂಡು ಬೇಸಾಯ ಮಾಡುತ್ತಿದ್ದ. ಅನಂತರ ಜೊಹಾನ್ಸ್‍ಬರ್ಗ್‍ನಲ್ಲಿ ನೆಲಸಿದ. ಕೆಲಕಾಲ ಜುಲುಲ್ಯಾಂಡಿನಲ್ಲಿ ವ್ಯಾಪಾರಿಯೂ ಆಗಿದ್ದ. ವೂರ್‍ಸ್ಲಾಗ್ ಕೃತಿಯ ವಿಮರ್ಶೆ ಪ್ರಕಟಣೆಯಲ್ಲಿ ಈತ ಕ್ಯಾಂಪ್‍ಬೆಲ್‍ನಿಗೆ ನೆರವಾದ. ಅನಂತರ ಜಪಾನಿನಲ್ಲಿ ಎರಡು ವರ್ಷ ಕಳೆದ. ಈತನ 25ನೆಯ ವಯಸ್ಸಿನಲ್ಲಿ ಟೋಕಿಯೋದ ಇಂಗ್ಲಿಷ್ ಸಾಹಿತ್ಯದ ಅಧ್ಯಕ್ಷ ಪೀಠವನ್ನು ಅಲಂಕರಿಸಲು ಕರೆ ಬಂದಿತು. ಅದನ್ನು ನಿರಾಕರಿಸಿ ಯೂರೋಪಿನ ಪ್ರವಾಸ ಕೈಕೊಂಡ. ಸ್ವಲ್ಪಕಾಲ ಗ್ರೀಸ್ ದೇಶದಲ್ಲೂ ಇದ್ದ.

ಟರ್ಬಾಟ್ ವುಲ್ಫ್ (1926), ಸಾಡೊ (1931), ದಿ ಕೇಸ್ ಈಸ್ ಅಲ್ಬರ್ಡ್ (1932), ದಿ ಇನ್‍ವೇಡರ್ಸ್ (1934), ಅಲಿ ದಿ ಲಯನ್ (1930), ಮ್ಯೂಸಿಯಂ ಪೀಸಸ್ (1952)-ಇವು ಈತನ ಕೆಲವು ಕಾದಂಬರಿಗಳು, ಐ ಸ್ಟೀಕ್ ಆಫ್ ಆಫ್ರಿಕಾ (1928), ಪೇವರ್ ಹೌನನ್ (1929), ದಿ ಚೈಲ್ಡ್ ಆಫ್ ಕ್ವೀನ್ ವಿಕ್ಟೋರಿಯಾ (1953), ಪೋರ್ ಕಂಟ್ರೀಸ್ (1949)-ಇವು ಈತನ ಕಥಾ ಸಂಕಲನಗಳು. ಈತ ಕೆಲವು ಕವನಸಂಕಲಗಳನ್ನೂ ಮತ್ತು ಸಿಸಿಲ್ ರ್ಹೋಡ್ಸ್ (1933) ಎಂಬಾತನನ್ನು ಕುರಿತಂತೆ ಜೀವನ ಚರಿತ್ರೆಯನ್ನೂ ರಚಿಸಿದ್ದಾನೆ. ಡಬಲ್ ಲೈವ್ಸ್ (1943) ಎಂಬುದು ಈತನ ಆತ್ಮಚರಿತ್ರೆ.
(ಎಚ್.ಎಸ್.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ